ಪುತ್ತೂರು: ಭಾರತೀಯ ಅಂಚೆ ಇಲಾಖೆಯ ಪುತ್ತೂರು ವಿಭಾಗೀಯ ಕಛೇರಿಯಲ್ಲಿ ಅಂತರ್ ರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮವನ್ನು ಪುತ್ತೂರು ವಿಭಾಗ ಹಾಗೂ ಹಾಸನ ವಿಭಾಗ ಜಂಟಿಯಾಗಿ ಆಯೋಜಿಸಿದ್ದವು. ಸಂಪನ್ಮೂಲ ವ್ಯಕ್ತಿಗಳಾಗಿ ಡಾ.ಅಂಕುಷ್ ಭಗತ್ (ಐ.ಪಿ.ಓ.ಎಸ್.) ಹಿರಿಯ ಅಂಚೆ ಅಧೀಕ್ಷಕರು ಜಮ್ಮು ವಿಭಾಗ, ಡಾ. ಏಂಜಲ್ ರಾಜ್ (ಐ.ಪಿ.ಓ.ಎಸ್.) ಹಿರಿಯ ಅಂಚೆ ಅಧೀಕ್ಷಕರು ಪುತ್ತೂರು ಅಂಚೆ ವಿಭಾಗ ಪುತ್ತೂರು ಭಾಗವಹಿಸಿದ್ದರು.
ಔದ್ಯೋಗಿಕ ಸ್ಥಳದಲ್ಲಿ ವೈಯಕ್ತಿಕ ಅರಿವಿಲ್ಲದೇ ಕರ್ತವ್ಯಪಾಲಿಸುತ್ತಿರುವ ಸಹೋದ್ಯೋಗಿ ಬಾಂಧವರ ಆರೋಗ್ಯವರ್ಧನೆಗೋಸ್ಕರ ತೆಗೆದುಕೊಳ್ಳ ಬೇಕಾದ ಅನೇಕ ಮುಂಜಾಗ್ರತಾ ಕ್ರಮದ ಬಗ್ಗೆ ಆನ್ ಲೈನ್ ಮೂಲಕ ಸಂವಾದ ನಡೆಸಲಾಯಿತು. ಡಾ.ಅಂಕುಷ್ ಭಗತ್ ಇವರು ಸಾಮೂಹಿಕ ಆರೋಗ್ಯದೊಂದಿಗೆ ವಿಶೇಷವಾಗಿ ಮಹಿಳೆಯರ ಆರೋಗ್ಯದ ಬಗ್ಗೆ ಬಹಳಷ್ಟು ಮಾಹಿತಿಯನ್ನು ವಿನಿಮಯ ಮಾಡಿದರು. ಅನಾರೋಗ್ಯಕ್ಕೆ ಕಾರಣಗಳು, ತೆಗೆದುಕೊಳ್ಳಬೇಕಾದ ಸಕಾಲಿಕ ಪ್ರಥಮ ಚಿಕಿತ್ಸೆಗಳು ಹಾಗೂ ಮುಂಜಾಗ್ರತಾ ಕ್ರಮವನ್ನು ಪ್ರೇಕ್ಷಕರಿಗೆ ಮನದಟ್ಟಾಗುವಂತೆ ವಿವರಿಸಿದರು. ಈ ಸಂದರ್ಭದಲ್ಲಿ ಮಾತನಾಡುತ್ತಾ, ಯೋಗ ಮತ್ತು ವ್ಯಾಯಾಮಗಳು ಪ್ರಸ್ತುತ ಪರಿಸ್ಥಿತಿಯಲ್ಲಿ ಯಾವರೀತಿಯಲ್ಲಿ ಆರೋಗ್ಯದಾಯಕ ಎನ್ನುವುದನ್ನು ತಿಳಿಸಿದರು.
ಅದೇ ರೀತಿ ಡಾ. ಏಂಜಲ್ ರಾಜ್ ಅವರು ಸಹೋದ್ಯೋಗಿ ಬಂಧುಗಳಲ್ಲಿ ಹಲ್ಲುಗಳ ಆರೋಗ್ಯದ ಬಗ್ಗೆ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮವನ್ನು ವಿವರಿಸಿದರು. ಈ ಸಂದರ್ಭದಲ್ಲಿ ಆರೋಗ್ಯಕರ ಆಹಾರ ಚರ್ವಣ ಪದ್ದತಿಯನ್ನು ತಿಳಿಸಿದರು. ವಿಶೇಷವಾಗಿ ಹಲ್ಲುಗಳಿಂದ ಬಾಯಲ್ಲಿ ಹರಡಬಹುದಾದ ಕ್ಯಾನ್ಸರ್ ನ ಬಗ್ಗೆ ಮಾಹಿತಿಯನ್ನು ನೀಡಿದರು. ಮಕ್ಕಳಲ್ಲಿ ಹಲ್ಲಿನ ಶುಚಿತ್ವದ ಬಗ್ಗೆ ಪೋಷಕರು ತೆಗೆದುಕೊಳ್ಳಬೇಕಾದ ಅಗತ್ಯ ಕ್ರಮಗಳನ್ನು ವಿವರಿಸಿದರು. ಇದೇ ಸಂದರ್ಭದಲ್ಲಿ ಪ್ರೇಕ್ಷಕರೂ ಸಹ ವಿವಿಧ ರೀತಿಯ ಪ್ರಶ್ನೆಗಳನ್ನು ವೈದ್ಯದ್ವಯರಿಗೂ ಕೇಳುವ ಮೂಲಕ ಕಾರ್ಯಕ್ರಮದ ಪ್ರಯೋಜನ ಪಡೆದುಕೊಂಡರು.
ಸಂಸಾರದ ಆಧಾರ ಸ್ತಂಭವಾಗಿರುವ ಮಹಿಳಾ ಉದ್ಯೋಗಿಗಳಿಗೆ ಆರೋಗ್ಯದ ಬಗ್ಗೆ ಎಚ್ಚರ ವಹಿಸುವುದರೊಂದಿಗೆ ಸಾಂಸಾರಿಕವಾಗಿಯೂ, ಔದ್ಯೋಗಿಕವಾಗಿಯೂ, ಆರೋಗ್ಯಕರ ವಾತಾವರಣ ಸೃಷ್ಟಿಸುವ ಮಾಹಿತಿಯನ್ನು ಒದಗಿಸುವುದರ ಮೂಲಕ ಅರ್ಥಪೂರ್ಣವಾಗಿ ಈ ಅಂತರ್ ರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನುಹಿರಿಯ ಅಂಚೆ ಅಧೀಕ್ಷಕರ ಮುತುವರ್ಜಿಯಲ್ಲಿ ಪುತ್ತೂರು ವಿಭಾಗದಲ್ಲಿ ಆಚರಿಸಲಾಯಿತು.