ಅಂಚೆ ಕಚೇರಿಯಲ್ಲಿ ಉಳಿತಾಯ ಮಾಡಿ ಆದಾಯ ತೆರಿಗೆಯನ್ನು ಉಳಿಸಿ

ಪುತ್ತೂರು ದಿನಾಂಕ 19.01.2023.
ಭಾರತೀಯ ಅಂಚೆ ಇಲಾಖೆಯು ತೆರಿಗೆದಾರರಿಗೆ ತಾವು ಪಾವತಿಸುವ ಆದಾಯ ತೆರಿಗೆಯ ಮೊತ್ತವನ್ನು ಉಳಿಸಲು ವಿತ್ತೀಯ ವ್ಯವಹಾರಗಳ ಮೂಲಕ ಹೆಚ್ಚಿನ ಬಡ್ಡಿ ದರದೊಂದಿಗೆ ತನ್ನ ಗ್ರಾಹಕರಿಗೆ ಸುವರ್ಣಾವಕಾಶವನ್ನು ನೀಡುತ್ತಿದೆ. ಅಂಚೆ ಇಲಾಖೆಯ ಪುತ್ತೂರು ವಿಭಾಗದ ಎಲ್ಲಾ ಇಲಾಖಾ ಉಪ-ಅಂಚೆ ಕಛೇರಿ ಮತ್ತು ಪ್ರಧಾನ ಅಂಚೆ ಕಛೇರಿಗಳಲ್ಲಿ ಲಭ್ಯವಿರುವ ವಿವಿಧ ವಿತ್ತೀಯ ಯೋಜನೆಗಳಲ್ಲಿ ಗ್ರಾಹಕರು ಹೂಡಿಕೆಯನ್ನು ಹೂಡುವುದರಿಂದ ತತ್ಸಂಬಂಧಿತ ಆದಾಯ ತೆರಿಗೆಯು (ಇನ್ ಕಮ್ ಟ್ಯಾಕ್ಸ್) ಉಳಿತಾಯವಾಗಲಿದೆ. ಗ್ರಾಹಕರು ಈ ಕೆಳಗೆ ನಮೂದಿಸಿದ ಯೋಜನೆಗಳಲ್ಲಿ ಅತೀ ಸುಲಭವಾಗಿ ಪ್ರಸ್ತುತ ಲಭ್ಯವಿರುವ ವಿವಿಧ ಆಯಾಮಗಳಿಂದ (ನಗದು, ಚೆಕ್, ನೆಫ್ಟ್, ಐ.ಪಿ.ಪಿ.ಬಿ. ) ಹಣವನ್ನು ಹೂಡಿಕೆ ಮಾಡಬಹುದು.

  1. ರಾಷ್ಟ್ರೀಯ ಉಳಿತಾಯ ಪತ್ರ.
  2. ಪಬ್ಲಿಕ್ ಪ್ರಾವಿಡೆಂಟ್ ಫಂಡ್.
  3. ಅಂಚೆ ಜೀವ ವಿಮೆ,
  4. ಸುಕನ್ಯಾ ಸಮೃದ್ಧಿ ಯೋಜನೆ.
  5. ಐದು ವರ್ಷದ ಕಾಲಾವಧಿ ಠೇವಣಿ.
  6. ಹಿರಿಯ ನಾಗರಿಕ ಉಳಿತಾಯ ಯೋಜನೆ

ಈ ಮೇಲಿನ ಯೋಜನೆಗಳಲ್ಲಿ ಗ್ರಾಹಕರು ಒಟ್ಟು 1.5 ಲಕ್ಷ ಮೊತ್ತದ ವರೆಗಿನ ಹೂಡಿಕೆಗೆ ಆದಾಯ ತೆರಿಗೆ ವಿನಾಯತಿಯನ್ನು ಪಡೆಯಬಹುದು.

ಹಾಗೆಯೇ, ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್.ಪಿ.ಎಸ್.) ಯಲ್ಲಿ ಭಾರತೀಯ ಅಂಚೆ ಇಲಾಖೆಯ ಮೂಲಕವೂ ಗ್ರಾಹಕರು ಹೂಡಿಕೆ ಮಾಡಬಹುದಾಗಿದೆ. ಈಗಾಗಲೇ ಬಹಳಷ್ಟು ಗ್ರಾಹಕರು ತಮ್ಮ ಜೀವನದ 60 ಸಂವತ್ಸರದ ನಂತರ ಈ ಯೋಜನೆಯಡಿಯಲ್ಲಿ ಮಾಸಿಕ ಪಿಂಚಣಿ ಪಡೆಯುವ ದೃಷ್ಠಿಯಿಂದ ಹೂಡಿಕೆ ಮಾಡುತ್ತಿದ್ದಾರೆ. ಈ ಯೋಜನೆಯಲ್ಲಿ ಹೂಡಿಕೆಯಿಂದಾಗಿ ಗ್ರಾಹಕನೊಬ್ಬನು ಮೇಲಿನ 1.5 ಲಕ್ಷದ ವರೆಗಿನ ಮೊತ್ತದ ಹೂಡಿಕೆಯಲ್ಲದೇ, ರೂ.50,000/- ಹೆಚ್ಚಿನ ಮೊತ್ತದ ಹೂಡಿಕೆಗೂ ಆದಾಯ ತೆರಿಗೆ ವಿನಾಯತಿಯನ್ನು ಪಡೆಯುತ್ತಾನೆ. ಅಂದರೆ ರೂಪಾಯಿ ಎರಡು ಲಕ್ಷದ ವರೆಗಿನ ಹೂಡಿಕೆಗೆ ಗ್ರಾಹಕನೊಬ್ಬನು ಆದಾಯ ತೆರಿಗೆ ವಿನಾಯಿತಿಗೆ ಅರ್ಹನಾಗಿರುತ್ತಾನೆ. ಈ ಖಾತೆಯನ್ನು ತೆರೆಯಲು ಗ್ರಾಹಕರು ತಮ್ಮ ಆಧಾರ್ ಕಾರ್ಡ್, ಪಾನ್ ಕಾರ್ಡ್ ಹಾಗೂ ಬ್ಯಾಂಕ್ ಪಾಸ್ ಪುಸ್ತಕದೊಂದಿಗೆ ಯಾವುದೇ ಇಲಾಖಾ ಅಂಚೆ ಕಛೇರಿಯನ್ನು ಭೇಟಿ ಮಾಡಬಹುದಾಗದೆ.
ಆದ್ದರಿಂದ ಈ ವಿಪುಲ ಅವಕಾಶವನ್ನು ಗ್ರಾಹಕರೆಲ್ಲರೂ ಸಹ ಸದುಪಯೋಗಪಡಿಸಿಕೊಂಡು ತಾವು
ಪಾವತಿಸುವ ಆದಾಯ ತೆರಿಗೆಯ ಮೊತ್ತವನ್ನು ಉಳಿತಾಯ ಮಾಡಲು ವಿನಂತಿಸಲಾಗಿದೆ.

Leave a Comment