Untold Story of Roll out

ಅದು ಮುಂಜಾವಿನ ಆರು ಮೂವತ್ತರ ಸಮಯ. ಆಗಿನ್ನೂ ಏಳದವರು ದಡಬಡನೆ ಎದ್ದು ತಡಕಾಡಿದ್ದೇ ಮೊಬೈಲ್ ಗಾಗಿ. ಅದೂ ಬೆಡ್ ಮೇಲೆ ಸುಖಾಸನದಲ್ಲಿ ಮಲಗಿ ರೀಲ್ಸ್ ನೋಡೋದಕ್ಕೆ ಅಂದುಕೊಂಡ್ರೆ….ನಿಮ್ಮ ಊಹೆ ತಪ್ಪಾಗುತ್ತೆ ನೋಡಿ….! ಹಿಂದಿನ ದಿನ ಎಸ್.ಎ ನೂತನ್ ಸರ್ ಮೇಲಿಂದ ಮೇಲೆ,ಆರುವರೆಗೆ ಆಫೀಸ್ ಮೊಬೈಲ್ ಒಳ್ಳೆ ನೆಟ್ವರ್ಕ್ ಇರೋ ಕಡೆ ಇಡಬೇಕೆಂದಿದ್ದು ಹತ್ತರಲ್ಲಿ ಒಂಬತ್ತು ಮಂದಿಗೆ ಅಲರಾಂ ಇಲ್ಲದೆ ಎಬ್ಬಿಸಿಬಿಟ್ಟಿತ್ತು….ಮನೆಗೆಲಸದ ಗಡಿಬಿಡಿಯ ಹೆಂಗಸರಂತು ತಡಬಡಿಸುತ್ತಾ ಕಾವಲಿಯನ್ನು ಒಲೆಯ ಮೇಲಿಟ್ಟಿದ್ದರೋ ಇಲ್ವೋ…ಮೊಬೈಲ್ ಮಾತ್ರ ಒಳ್ಳೆ ನೆಟ್ವರ್ಕ ಇರುವ ಎತ್ತರದ ಜಾಗಕ್ಕೆ ಏರಿಸಿದ್ದದಂತು ನಿಜ. ಇದ್ರ ನಡುವೆ ದರ್ಪಣ್ ಗ್ರೂಫ್ ನಲ್ಲಿ ಏನಾದ್ರೂ ಮೆಸೇಜ್ ಬಂದಿದೆಯಾ….!? ಇಲ್ಲಾ ಯಾರ್ದಾದ್ರೂ ಮೊಬೈಲ್ ಅಪ್ಡೇಟ್ ಆಗಿದೆಯಾ…!? ಅಂತೆಲ್ಲಾ ಗಡಿಬಿಡಿಯಲ್ಲೂ ಗಡಿಗಡಿ ಮೊಬೈಲ್ ಚೆಕ್ ಮಾಡೋವಷ್ಟರಲ್ಲಿ ಗಂಟೆ ಎಂಟಾಗಿತ್ತು. ಮೊದ್ಲೇ ಇವ್ರು ಎಂಟು ಗಂಟೆಗೆ ಬರಬೇಕೆನ್ನುವ ತಾಕೀತಿನ ಮೆಸೇಜುಗಳು ದಬದಬ ಅಂತ ಇದ್ದ ಬದ್ದ ಗ್ರೂಫ್ ಗಳಲ್ಲಿ ಬಂದದ್ದು ನೆನಪಾಗಿ ಎಲ್ಲರೂ ತಮ್ಗೆ ತಿಳಿಸಿದ ಜಾಗಕ್ಕೆ ದೌಡಾಯಿಸಿದ್ರು…

ಸಮಯ ಪಾಲಕರೆಲ್ಲರೂ ಸರಿಯಾಗಿ ಗಂಟೆ ಎಂಟಕ್ಕೆ ಬಂದು ಶಿಸ್ತಿನ ಸಿಪಾಯಿಗಳಂತೆ ತಮಗೆ ತಿಳಿಸಿದ ಸಲಕರಣೆಗಳನ್ನು ಸಿದ್ಧಪಡಿಸಿಕೊಂಡು ರೆಡಿಯಾಗಿದ್ದರು….ಅರ್ಥಾತ್ ಯುದ್ಧ ಸನ್ನದ್ದರಾಗಿದ್ದರೆನ್ನುವುದು ಸರಿಯಾದ ಪದ ಪ್ರಯೋಗ ಅನ್ನಿಸ್ತದೆ…”ಇನ್ನು ಸರ್ವರ್ ಕೈ ಕೊಡುತ್ತೆ….ಅವರು ಹೇಳಿದ್ದು ಮಾತ್ರ ಬರುವಾಗ ಒಂಬತ್ತಾಗ್ತದೆ….ಎಷ್ಟು ಲೇಟ್ ಹೋದ್ರೂ ನಮ್ದು ಆಗದೆ ಕಳಿಸುದಿಲ್ಲ….”ಎಂಬೆಲ್ಲಾ ಲೆಕಾಚಾರಗಳನ್ನು ಹಾಕಿಕೊಂಡ ಅತೀ ಬುದ್ಧಿವಂತರು ಒಂಬತ್ತು ಹತ್ತರ ಆಸು ಪಾಸಲ್ಲಿ ಬಂದು ಗುಂಪಲ್ಲಿ ನುಸುಳಿ ತಾವೂ ತಮ್ಮ ಆಯುಧಗಳೊಂದಿಗೆ ಸರ್ವಸನ್ನದ್ಧರಾದರು… ಆದರೂ ಲೇಟ್ ಬಂದವರೇ ಇವತ್ತು ಲೇಟೆಸ್ಟ್ ಆಗಿ ಮಿಂಚಿದ್ದು ನೋಡಿ….‌!ಯಾಕಂದ್ರೆ ಸರ್ವರ್ ತನ್ನ ಮೇಲಿನ ಒತ್ತಡಕ್ಕೆ ಹೈರಾಣಾಗಿ ಆಮೆ ವೇಗದಲ್ಲಿ ಸಾಗಿತ್ತು.

ಅಸಲಿ ಆಟ ಶುರುವಾಗಿದ್ದೇ ಈಗ ನೋಡಿ….ಗಂಟೆ ಹತ್ತು ದಾಟಿ ಹನ್ನೊಂದಾಗಿತ್ತು…ಕೊಂಚವೇ ಬಿಸಿಲು ಕಾವೇರಲು ಶುರುವಾಗಿತ್ತು. ಇದರ ಜೊತೆಗೆ ಬೇಗ ಬಂದವರೂ ,ಲೇಟ್ ಬಂದವರು ಎನ್ನುವ ಬೇಧವಿಲ್ಲದೆ ಎಲ್ಲರೂ ಬೆಚ್ಚಾಸುರರಾಗಿ ನಿಧಾನವಾಗಿ ಬದಲಾಗಿದ್ದರು. ಬೆಳ್ತಂಗಡಿಯ ಲೇಡಿ ಶೂರರಂತು ವಾಟ್ಸಾಫ್ ಗ್ರೂಫ್ ನಲ್ಲಿ ಎಂಟು ಗಂಟೆಗೇ ಬರಬೇಕೆಂದು ರಂಗು ರಂಗಾಗಿ ಫೋಸ್ಟರ್ ಬರೆದು ಪೋಸ್ಟಿಸಿದ್ದ ಪ್ರಜ್ವಲ್ ಮೇಲೆ ಏಕಾಏಕಿ ಹರಿಹಾಯ್ದಿದ್ದರು. ಇದಕ್ಕೆಯಾ ನೀವು ಎಂಟುಗಂಟೆಗೆ ಬರಲು ಹೇಳಿದ್ದು…ಎಂದಾಗ ಪ್ರಜ್ವಲ್ ದಂಗಾಗಿದ್ದರು. ಇನ್ನು ಹನ್ನೆರಡಕ್ಕೆ ತಾಳ್ಮೆ ತಳ‌ಹಿಡಿದು ಸೀದು ನಾರಲು ಶುರುವಾಯಿತು. ಒಂದು ಕಡೆಯಲ್ಲಿ ಧಾರಕಾರವಾಗಿ ಸುರಿವ ಬೆವರು….ಇನ್ನೊಂದು ಕಡೆ ಮೊಬೈಲ್ ತುಂಬೆಲ್ಲಾ ಸಾವಿರ ಕಣ್ಣಾಗಿಸಿದ ಸುಸ್ತು….ಈ ಸಮಯದಲ್ಲಿ ಮೂಡಿ ಬಂದ ಶಾಪಗಳನ್ನು ವರ್ಣಿಸಲಸಾಧ್ಯ… ಹಳಬರಿಗೆ ತಮ್ಮ ಹಳೆಯ ಸ್ನೇಹಿತರ ಜೊತೆಗೆ ಇಲಾಖೆಯ ಸ್ಥಿಂತ್ಯರಗಳ ಅವಲೋಕನಕ್ಕೆ ಇದೊಂದು ಉತ್ತಮ ವೇದಿಕೆಯಾಗಿತ್ತು. ದುಂಬು ಬರೆಪುನವ್ವು ಇಪ್ಪುನಗ ಭಾರಿ ಎಡ್ಡೆ ಇತ್ತ್ಂಡ್ ಉಂದು ಮಾತ ಏರೆಗಾವ್ಯೇ ಕಿರಿಕಿರಿ…ಎಂಕ್ಲೆಗ್ ನನ ಉಂದು ಮಾತ ಬೋಡ ಅಂತ ಜೀವನದ ಜೀಗುಜ್ಜೆಯನ್ನು ಹದವಾಗಿ ಮೆಲ್ಲತೊಡಗಿದರು. ಇನ್ನು ನಿನ್ನೆ ಮೊನ್ನೆ ಬಂದವರ ಕಥೆ ಹೇಳಿ ಪ್ರಯೋಜನ ಇಲ್ಲ ನೋಡಿ. ಮೊನ್ನೆ ತಾನೇ ಹುಟ್ಟಿದ ಕರುವಿನ ಕಿವಿಗೆ ಗಾಳಿ ನುಗ್ಗಿದಾಗ ಚಂಗನ್ನೆ ಇತ್ತಿಂದತ್ತ ಹಾರುವಂತೆ ಹಾರಲು ಶುರುವಿಟ್ಟಿದ್ದರು. ಹೊಸ ಆ್ಯಪ್ ನ ಪತ್ತೆ ಇಲ್ಲದ್ದನ್ನು ಕಂಡ ನಮ್ಮ ಕಿರಿಯನಾಗರೀಕರು ಈ‌ ಸಮಯವನ್ನು ಸೆಲ್ಫಿ,ರೀಲ್ಸ್ ಗಳಿಗೆ ಸದ್ವಿನಿಯೋಗಗೊಳಿಸಿದರು. ಅದರ ಪಡಿಯಚ್ಚುಗಳನ್ನು‌ ನೀವು ಹಲವರ ಸ್ಟೇಟಸ್ ಗಳಲ್ಲಿ ಈಗಾಗಲೇ ನೋಡಿರಬಹುದು. ಅದೇನೆ ಸರ್ಕಸ್ ಮಾಡಿದರೂ ಆ್ಯಾಪ್ ತಪ್ಪಿಯೂ ನಮ್ಮ ಬಳಿ ಸುಳಿದಿರಲಿಲ್ಲ.

ಗಂಟೆ ಒಂದಾಗುತ್ತಾ ಬರುತ್ತಿದ್ದಂತೆ ಬೆರಳಣಿಕೆಯ ಜನರ ಮೊಬೈಲ್ ಗೆ ಹೊಸ ಆ್ಯಾಪ್ ನ ದರ್ಶನವಾಗಿತ್ತು…. ಆ್ಯಪ್ ಬಂದವರು RCB ಗೆದ್ದಷ್ಟೇ ಖುಷಿಪಟ್ರು. ಜೀವನದಲ್ಲಿ ತಾವು ಅಭೂತ ಪೂರ್ವವಾದದ್ದೊಂದ್ದನ್ನು ಪಡೆದುಕೊಂಡ ಖುಷಿ. ಆ್ಯಪ್ ಬರದವರ ಮುಂದೆ ತಮ್ಮ ಸಾಧನೆಯನ್ನು ಎದೆಯುಬ್ಬಿಸಿ ಹೇಳಿಕೊಂಡು ಖುಷಿಪಟ್ಟರು. ಆ್ಯಾಪ್ ಬಾರದವರ ಮುಖ ಸೊರಗಿ ಬಾಡಿತ್ತು..

ಗಂಟೆ ಒಂದು ದಾಟಿ ಎರಡಾಗುತ್ತಲೇ….ಮೊಬೈಲ್ ಬ್ಯಾಟರಿ ಜೊತೆಗೆ ಹೊಟ್ಟೆಯ ಬ್ಯಾಟರಿಯೂ ಖಾಲಿಯಾಗಿತ್ತು….ಮನಸ್ಸು ಕ್ರೋಧಗೊಂಡಿತ್ತು… ಬಾರದೇ ಇರುವ ಆ್ಯಾಫ್ ಗೆ ಹಿಡಿಶಾಪ ಹಾಕುತ್ತ, ತಮ್ಮ ಅಸಹಾಯಕತೆಗೆ ಮರುಗಿಕೊಳ್ಳುತ್ತಾ ಹೋಟೇಲ್ ಕಡೆ ಮುಖ ಮಾಡಿದರು. ಬೇಗ ಹೋಗಬಹುದೆಂದು ದೂರ-ಆಲೋಚನೆಯಲ್ಲಿ ಬಂದಬರಿಗೆ ನಿರಾಸೆಯಾಗಿತ್ತು. ಊಟಕ್ಕೆ ಹೋದವರಲ್ಲಿ ಕೆಲವರು ಮನೆಗೇ ಹೋಗಿ ಉಂಡೆದ್ದು ಆರಾಮದಲ್ಲಿ ಹಿಂದಿರುಗಿದರೆ…ಇನ್ನು
ತೀರ ಸೀರಿಯಸ್ ಆಗಿದ್ದವರು ಸಿಕ್ಕಿದ್ದನ್ನು ಅರ್ಧಂಬರ್ಧ ತಿಂದು ಮತ್ತೆ ಮೊಬೈಲ್ ಹಿಡಿದು ಟೆರೇಸ್…ಮೆಟ್ಟಿಲುಗಳನ್ನು ಹತ್ತಿ ಅಲ್ಲಾದರೂ ತಮ್ಮ ಮೊಬೈಲ್ ಗೆ ಅ್ಯಾಪ್ ಬರಬಹುದೆನ್ನುವ ಕಸರತ್ತು ಮಾಡಲು ತೊಡಗಿದರು. ಕೆಲವರ ಕಣ್ಣಂತು mobicontrolನಂತೆ ಕೆನೆಕ್ಟ್ ಆ್ಯಾಂಡ್ ಡಿಸ್ಕನೆಕ್ಟ್ ಆಗಲು ಶುರುವಾಗಿತ್ತು. ಬೆಳಗ್ಗೆ ಸರದಿ ಸಾಲಿನಲ್ಲಿ ಜೋಡಿಸಿದ್ದ ಖುರ್ಚಿಗಳಲ್ಲಿ ಕೂತಿದ್ದವರು…ಸಂಜೆಯಾಗುತ್ತಲೆ ಮೊಬೈಲ್ ಹಿಡಿದು ಏರಬಾರದ ಕಡೆ ಏರಿ….ಇಳಿಯಬಾರದ ಕಡೆಯಲ್ಲೆಲ್ಲಾ ಇಳಿದು ಜಿದ್ದಿಗೆ ಬಿದ್ದು ಅ್ಯಾಪ್ ಇನ್ಸ್ಟಾಲ್ ಮಾಡಿಕೊಂಡ್ರು.

ಮುಂಜಾನೆ ಎಂಟು ಗಂಟೆಗೆ ಶುರುವಾದ ಕಥೆ…ವ್ಯಥೆಯಾಗಿ ಮುಗಿದ್ದದ್ದು ಸಂಜೆ ಆರಕ್ಕೆ. ಸುಸ್ತಾಗಿ ಸುಟ್ಟ ಬದನೆಕಾಯಿಯಾಗಿದ್ದ ಮುಖಗಳೆಲ್ಲವೂ ಮೊಬೈಲ್ ಅಟೋಮೆಟಿಕ್ ರಿ-ಸ್ಟಾರ್ಟ್ ಆಗುತ್ತಲೇ ಖುಷಿಯಲ್ಲಿ ಅರಳಿದ್ದಂತು ಸತ್ಯ….

ಏನೇ ಆದ್ರೂ ನಮ್ಮೆಲ್ಲಾ ರಗಳೆ…ರಂಪಗಳನ್ನು ಸಹಿಸಿಕೊಂಡು ರೋಲ್ ಔಟ್ ಮುಗಿಸಿಕೊಟ್ಟ ಎಲ್ಲರಿಗೂ ಧನ್ಯವಾದಗಳನ್ನು ಹೇಳಲೇ ಬೇಕು. ದಿನಾಂತ್ಯಕ್ಕೆ ತಾಳ್ಮೆ ಗೆದ್ದಿತ್ತು….

Leave a Comment