ಜಾಂಬೂರಿ 2022 ಅಂಗವಾಗಿ ಭಾರತೀಯ ಅಂಚೆ ಇಲಾಖೆಯ ಪುತ್ತೂರು ವಿಭಾಗ ವಿಶೇಷ ಅಂಚೆ ಲಕೋಟೆ ಬಿಡುಗಡೆ

ಪುತ್ತೂರು ದಿನಾಂಕ 21.12.2022.

“ಸಂಸ್ಕೃತಿಯಿಂದ ಯುವಜನತೆಯಲ್ಲಿ ಏಕತೆ” ಎನ್ನುವ ಧ್ಯೇಯವಾಕ್ಯದಡಿಯಲ್ಲಿ ಜೈನಕಾಶಿ ಮೂಡುಬಿದ್ರೆಯಲ್ಲಿ ನಡೆಸಲ್ಪಡುತ್ತಿರುವ ಅಂತರಾಷ್ಟ್ರೀಯ ಮಟ್ಟದ ಸಾಂಸ್ಕೃತಿಕ ಕಲಾ ಉತ್ಸವ –“ಜಾಂಬೂರಿ 2022 “ ಅಂಗವಾಗಿ ಭಾರತೀಯ ಅಂಚೆ ಇಲಾಖೆಯ ಪುತ್ತೂರು ವಿಭಾಗವು ಆಳ್ವಾಸ್ ವಿದ್ಯಾಸಂಸ್ಥೆಯ ಪ್ರಾಯೋಜಕತ್ವದೊಂದಿಗೆ ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆಗೊಳಿಸುವ ಕಾರ್ಯಕ್ರಮವನ್ನು ಆಯೋಜಿಸಿತು. ಜಾಗತಿಕ ಶಾಂತಿ ಮತ್ತು ಅಭಿವೃದ್ಧಿಯನ್ನು ಸೃಷ್ಟಿಸಲು ಪ್ರಾದೇಶಿಕ ಸಂಸ್ಕೃತಿ ಮತ್ತು ಯುವಪೀಳಿಗೆಯ ಅಗತ್ಯತೆಗಳನ್ನು ಬೆಸೆಯುವ ಯುವ ಸ್ಕೌಟಿಯನ್ನರ ವೇದಿಕೆಯಾಗಿರುವ ಈ ಜಾಂಬೂರಿ ಉತ್ಸವದ ಸವಿನೆನಪಿಗಾಗಿ ವಿಶೇಷ ಲಕೋಟೆಯನ್ನು ಡಾ. ಏಂಜಲ್ ರಾಜ್ (ಐ.ಪಿ.ಒ.ಎಸ್.) ಹಿರಿಯ ಅಂಚೆ ಅಧೀಕ್ಷಕರು ಪುತ್ತೂರು ವಿಭಾಗ ಪುತ್ತೂರು ಇವರು ಬಿಡುಗಡೆಗೊಳಿಸಿದರು. ಈ ಕಾರ್ಯಕ್ರಮದಲ್ಲಿ , ಕರ್ನಾಟಕದ ಭಾರತ ಸ್ಕೌಟ್ಸ್ ಮತ್ತು ಗೈಡ್ಸ ನ ರಾಜ್ಯ ಮುಖ್ಯ ಕಮಿಷನರ್ ಹಾಗೂ ಮಾಜಿ ಗೃಹ, ಸಾರಿಗೆ, ಕೈಗಾರಿಕೆ ಮತ್ತು ವಿತ್ತ ಸಚಿವರಾದ ಶ್ರೀ ಪಿ.ಜಿ.ಆರ್ ಸಿಂಧ್ಯ ಇವರು ಪಾಲ್ಗೊಂಡು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಖ್ಯಾತ ಅಂಚೆ ಚೀಟಿ ಸಂಗ್ರಹಣಾಕಾರರಾಗಿರುವ ಶ್ರೀ. ರಾಯಿ ರಾಜ್ ಕುಮಾರ್, ಶ್ರೀ. ಸುಧಾಕರ್ ರವರು ಉಪಸ್ಥಿತರಿದ್ದರು. ಹಾಗೆಯೇ ಈ ಕಾರ್ಯಕ್ರಮದಲ್ಲಿ ಶ್ರೀ ಲೋಕನಾಥ ಎಂ ಸಹಾಯಕ ಅಂಚೆ ಅಧೀಕ್ಷಕರು, ಮಾರ್ಕೆಟಿಂಗ್ ಎಕ್ಸಿಕ್ಯುಟಿವ್ ಶ್ರೀ ಗುರುಪ್ರಸಾದ್ ಕೆ ಎಸ್, ವಿಭಾಯೀಯ ಪ್ರಶಿಕ್ಷಕರಾಗಿರುವ ಶ್ರೀ. ರೋಹನ್ ಲೂಯೀಸ್ ರವರು ಹಾಗೂ ಇನ್ನಿತರ ಅಂಚೆ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಈ ಉತ್ಸವದಲ್ಲಿ ಪುತ್ತೂರು ವಿಭಾಗದಿಂದ ವಿಸ್ತೃತ ಅಂಚೆ ಸೇವಾ ಕೌಂಟರನ್ನು ವ್ಯವಸ್ಥೆ ಮಾಡಲಾಗಿದೆ. ಈ ಕೌಂಟರ್ ನ ಮೂಲಕ ಸಾರ್ವಜನಿಕರಿಗೆ ಆಧಾರ್ ಸೇವೆ, ಸ್ಥಳದಲ್ಲೇ ಐ.ಪಿ.ಪಿ.ಬಿ ಖಾತೆ ತೆರೆಯುವುದು, ಐ.ಪಿ.ಪಿ.ಬಿ ಯ ಮೂಲಕ ಅಪಘಾತ ವಿಮಾ ಸೇವೆ, ಅಂಚೆ ಚೀಟಿ ಸಂಗ್ರಹಣೆಯ ಪ್ರದರ್ಶನ, ಮೈ ಸ್ಟಾಂಪ್ (ತಮ್ಮದೇ ಭಾವ ಚಿತ್ರವಿರುವ ಅಂಚೆ ಚೀಟಿ.), ಅಂಚೆ ಜೀವ ವಿಮೆ ಮತ್ತು ಗ್ರಾಮೀಣ ಅಂಚೆ ವಿಮಾ ಸೇವಾ ಸೌಲಭ್ಯ ಮತ್ತು ಇನ್ನಿತರ ಅಂಚೆ ಸೇವೆಗಳನ್ನು ನೀಡಲಾಗುವುದು. ಈ ಸೇವಾ ಕೌಂಟರಿನ ಸದುಪಯೋಗ ಪಡೆದುಕೊಳ್ಳಲು ಸಾರ್ವಜನಿಕರಿಗೆ ಈ ಮೂಲಕ ವಿನಂತಿಸಲಾಗಿದೆ.

Leave a Comment