ಪೋಸ್ಟ್ ಆಫೀಸ್ ನ ಈ ಯೋಜನೆ ಬಗ್ಗೆ ತುಂಬಾ ಜನರಿಗೆ ಗೊತ್ತಿಲ್ಲ :ಮಹಿಳಾ ಸಮ್ಮಾನ್ ಉಳಿತಾಯ ಯೋಜನೆ

ಯಾರು ಈ ಖಾತೆಯನ್ನು ತೆರೆಯಬಹುದು?

ಈ ಯೋಜನೆಯಡಿ ಹೆಣ್ಣು ಮಕ್ಕಳು ಮತ್ತು ಮಹಿಳೆಯರು ಖಾತೆಯನ್ನು ತೆರೆಯಬಹುದು. ಯಾವುದೇ ವಯಸ್ಸಿನ ಹೆಣ್ಣು ಮಗು ತನ್ನ ತಂದೆ/ತಾಯಿ ಅಥವಾ ಕಾನೂನು ಬದ್ಧ ಪೋಷಕರ ಮೂಲಕ ಈ ಖಾತೆಯನ್ನು ತೆರೆಯಬಹುದು. ವಯಸ್ಸಿನ ನಿರ್ಬಂಧವಿಲ್ಲ.

ಎಲ್ಲಿ ಈ ಖಾತೆಯನ್ನು ತೆರೆಯಬಹುದು?

ನಿಮ್ಮ ಸಮೀಪದ ಯಾವುದೇ ಶಾಖಾ, ಉಪ ಅಥವಾ ಪ್ರಧಾನ ಅಂಚೆ ಕಛೇರಿಯಲ್ಲಿ ಈ ಖಾತೆಯನ್ನು ತೆರೆಯಬಹುದು.

ಕನಿಷ್ಠ / ಗರಿಷ್ಠ ಮಿತಿಗಳು :

ಕನಿಷ್ಠ ಠೇವಣಿ ರೂ. 1000/- ಗರಿಷ್ಠ ಠೇವಣಿ ರೂ. 2,00,000/-

ಖಾತೆಯ ಅವಧಿ :

ಖಾತೆ ತೆರೆದು ಎರಡು ವರ್ಷಗಳು ಪೂರ್ಣಗೊಂಡ ನಂತರ ಖಾತೆಯು ಪಕ್ವಗೊಳ್ಳುತ್ತದೆ.

ಒಬ್ಬರು ಮಹಿಳೆ ಅಥವಾ ಹೆಣ್ಣು ಮಗು ಎಷ್ಟು ಖಾತೆಯನ್ನು ಹೊಂದಬಹುದು?

ಎರಡು ಲಕ್ಷ ರೂಪಾಯಿಗಳ ಗರಿಷ್ಠ ಮಿತಿಯೊಳಗೆ ಒಬ್ಬರು ಈ ಯೋಜನೆಯಲ್ಲಿ ಎಷ್ಟು ಖಾತೆಗಳನ್ನಾದರೂ ತೆರೆಯಬಹುದು. ಆದರೆ, ತೆರೆಯಲ್ಪಡುವ ಪ್ರತೀ ಖಾತೆಗಳ ನಡುವೆ ಕನಿಷ್ಠ ಮೂರು ತಿಂಗಳ ಅಂತರ ಇರಬೇಕು.

ಖಾತೆಯನ್ನು ಯಾವಾಗ ತೆರೆಯಬಹುದು?

ದಿನಾಂಕ 01.04.2023 ರಿಂದ 31.03.2025 ವರೆಗೆ ಈ ಖಾತೆಯನ್ನು ತರೆಯಬಹುದು.

ಖಾತೆ ತೆರೆಯಲು ಬೇಕಾಗುವ ದಾಖಲೆಗಳು :

ಸರಳವಾದ ಒಂದು ಖಾತೆ ತೆರೆಯುವ ಅರ್ಜಿ. ಇದು ಅಂಚೆ ಕಛೇರಿಯಲ್ಲಿ ಲಭ್ಯವಿದೆ.

2 ಪಾಸ್ ಪೋರ್ಟ್ ಅಳತೆಯ ಫೋಟೋಗಳು.

ಆಧಾರ್ ಕಾರ್ಡ್‌ನ ಪ್ರತಿ.

ಪಾನ್ ಕಾರ್ಡ್‌ನ ಪ್ರತಿ, ಪಾನ್ ಇಲ್ಲದಿದ್ದಲ್ಲಿ ಫಾರಂ 60 ಸಲ್ಲಿಸಬಹುದಾಗಿದೆ.

ಖಾತೆ ತೆರೆಯುವಾಗ ಹಣ ಜಮಾ ಮಾಡುವ ವಿಧಾನ:

ನಗದು ಮೂಲಕ (ರೂ. 2,00,000/- ವರೆಗೆ)ಚೆಕ್ ಮೂಲಕ (ಚೆಕ್ಕನ್ನು ತಾವು ಖಾತೆ ತೆರೆಯುವ ಅಂಚೆ ಕಛೇರಿಯ ಪೋಸ್ಟ್ ಮಾಸ್ಟರ್‌ಗೆ ಬರೆಯಬೇಕು.ನೆಫ್ಟ್ ಮೂಲಕ (ತಾವು ಅಂಚೆ ಕಛೇರಿ ಉಳಿತಾಯ ಖಾತೆಗೆ ಮೂಲಕ ಹಣ ವರ್ಗಾಯಿಸಿ, ನಂತರ ಅಂಚೆ ಕಛೇರಿಗೆ ಭೇಟಿ ನೀಡಿ ಉಳಿತಾಯ ಖಾತೆಯಿಂದ ಹಣ ವರ್ಗಾಯಿಸಿ, ಈ ಖಾತೆ ತೆರೆಯಬಹುದು.

ಖಾತೆಯಿಂದ ಅವಧಿಗೂ ಮುನ್ನ ಹಣವನ್ನು ಭಾಗಶಃ ಹಿಂದೆ ಪಡೆಯಬಹುದೇ ಮತ್ತು ಯಾವಾಗ ಪಡೆಯಬಹುದು?

ಖಾತೆದಾರರು ಖಾತೆಯನ್ನು ತೆರೆದ ದಿನಾಂಕದಿಂದ ಒಂದು ವರ್ಷದ ಅವಧಿ ಮುಗಿದ ನಂತರ, ಅಂದರೆ ಖಾತೆ ಪಕ್ವಗೊಳ್ಳುವ ದಿನಾಂಕದ ಮೊದಲು ಇರುವ ಮೊತ್ತದ ಗರಿಷ್ಠ 40% ವರೆಗೆ ಒಂದು ಬಾರಿ ಹಣವನ್ನು ಹಿಂಪಡೆಯಬಹುದು.

ಖಾತೆಗೆ ಎಷ್ಟು ಬಡ್ಡಿ ದೊರಕುತ್ತದೆ?

ಬಡ್ಡಿ ದರವು ಆಕರ್ಷಕವಾಗಿದ್ದು ಪ್ರಸ್ತುತ ವಾರ್ಷಿಕ 7.5% ಆಗಿರುತ್ತದೆ. ಬಡ್ಡಿಯನ್ನು ತ್ರೈಮಾಸಿಕ ಆಧಾರದ ಮೇಲೆ ಲೆಕ್ಕಹಾಕಿ, ಖಾತೆ ಪಕ್ವಗೊಳ್ಳುವಾಗ ಖಾತೆಗೆ ಜಮಾ ಆಗುತ್ತದೆ.

ಖಾತೆಯ ಬಡ್ಡಿಗೆ ತೆರಿಗೆ ವಿನಾಯಿತಿ ಇದೆಯೇ?

ತೆರಿಗೆ ವಿನಾಯಿತಿ ಸೌಲಭ್ಯ ಲಭ್ಯವಿಲ್ಲ.

ಒಂದು ಕುಟುಂಬದಲ್ಲಿ ಅಪ್ರಾಪ್ತ (MINOR) ಹೆಣ್ಣು ಮಕ್ಕಳಿದ್ದರೆ, ಆ ಕುಟುಂಬದ ಮಹಿಳೆ ಗರಿಷ್ಠ 2 ಲಕ್ಷದ ಮಹಿಳಾ ಸಮ್ಮಾನ್ ಖಾತೆಯನ್ನು ಈಗಾಗಲೇಅಂಚೆ ಕಛೇರಿಯಲ್ಲಿ ತೆರೆದಿದ್ದರೆ, ಈ ಕುಟುಂಬದ ಅಪ್ರಾಪ್ತ ಹೆಣ್ಣು ಮಕ್ಕಳ ಹೆಸರಿನಲ್ಲಿ (ತಂದೆ/ತಾಯಿ ಅಥವಾ ಕಾನೂನು ಬದ್ಧ ಪೋಷಕರು) ಗಾರ್ಡಿಯನ್ ಆಗಿ ಗರಿಷ್ಠ 2 ಲಕ್ಷದ ಖಾತೆಯನ್ನು ತೆರೆಯಬಹುದೇ?

ಹೌದು, ತೆರೆಯಬಹುದಾಗಿದೆ. SB ಆದೇಶ ಸಂಖ್ಯೆ 10/2023 ರಲ್ಲಿ ಸೃಷ್ಟಿಕರಣ ಪಡಿಸಿದಂತೆ, 2 ಲಕ್ಷದ ಮಿತಿಯು ವೈಯಕ್ತಿಕ ಮಟ್ಟದ ಮಿತಿಯಾಗಿದೆ. ಆದುದರಿಂದ ಕುಟುಂಬದ ಪ್ರತಿ ಮಹಿಳಾ ಅಥವಾ ಹೆಣ್ಣು ಮಗುವಿನ ಹೆಸರಿನಲ್ಲ. ಗರಿಷ್ಠ 2 ಲಕ್ಷದ ವರೆಗೆ ಠೇವಣಿ ಇಡಬಹುದಾಗಿದೆ.

ಸುಕನ್ಯಾ ಸಮೃದಿ ಅಥವಾ ಭಾಗ್ಯಲಕ್ಷ್ಮಿ ಯೋಜನೆಯಡಿ ಸುಕನ್ಯಾ ಸಮೃದ್ಧಿ ಖಾತೆ ಹೊಂದಿರುವವರು ಈ ಖಾತೆ ತೆರೆಯಬಹುದೇ?

ಹೌದು, ತೆರೆಯಬಹುದು.

ಅಂಚೆ ಕಛೇರಿಯ Mobile Banking ಅಥವಾ Net Banking ಸೌಲಭ್ಯ ಹೊಂದಿರುವವರು ಅನ್‌ಲೈನ್ ಮೂಲಕ ಈ ಖಾತೆ ತೆರೆಯಬಹುದೇ?

ಸದ್ಯಕ್ಕೆ ಆನ್‌ಲೈನ್ ಮೂಲಕ ಈ ಖಾತೆ ತೆರೆಯಲು ಆಗುವುದಿಲ್ಲ. ಅಂಚೆ ಕಛೇರಿಗೆ ಭೇಟಿ ನೀಡಿ ತೆರೆಯಬಹುದು.

ಎಂತಹ ಸಂದರ್ಭಗಳಲ್ಲಿ ಎರಡು ವರ್ಷ ಅವಧಿಗೂ ಮುನ್ನ ಖಾತೆಯನ್ನು ಕೊನೆಗೊಳಿಸಲಾಗುತ್ತದೆ ?

ದುರದೃಷ್ಟವಶಾತ್ ಖಾತೆದಾರರು ಮರಣ ಹೊಂದಿದಲ್ಲಿ ಅಥವಾ ಖಾತೆಯನ್ನು ಹೆಣ್ಣು ಮಗುವಿನ ಹೆಸರಿನಲ್ಲಿ ತೆರೆದ ತಂದೆ / ತಾಯಿ ಅಥವಾ ಕಾನೂನು ಬದ್ಧ ಪೋಷಕರು ಮರಣ ಹೊಂದಿದ ಸಂದರ್ಭದಲ್ಲಿ, ಖಾತೆದಾರರು ಅಥವಾ ಪೋಷಕರು ಗಂಭೀರ ಕಾಯಿಲೆಗೆ ತುತ್ತಾಗಿ ಖಾತೆಯನ್ನು ಮುಂದುವರಿಸಲು ಅಸಾಧ್ಯವೆಂದು ಕಂಡು ಬಂದಲ್ಲಿ, ಖಾತೆಯನ್ನು ಅವಧಿಗೆ ಮುನ್ನ ಕೊನೆಗೊಳಸಲು ಸಾಧ್ಯವಿದೆ. ಇಂತಹ ಸಂದರ್ಭಗಳಲ್ಲಿ, ಖಾತೆಗೆ ಅನ್ವಯಿಸುವ ಮೂಲ ಬಡ್ಡಿದರವೇ ಅನ್ವಯಿಸುತ್ತದೆ. ಆದರೆ, ಇತರ ಸಂದರ್ಭಗಳಲ್ಲಿ ಖಾತೆ ತೆರೆದ 6 ತಿಂಗಳ ನಂತರ ಅವಧಿ ಪೂರ್ಣವಾಗಿ ಖಾತೆಯನ್ನು ಕೊನೆಗೊಳಿಸಿದಲ್ಲ, ಬಡ್ಡಿಯಲ್ಲಿ 2% ಕಡಿತಗೊಳಿಸಲಾಗುವುದು.

ಫಂಡ್ ಟ್ರಾನ್ಸ್‌ಫರ್ ಮೂಲಕ ಮಹಿಳಾ ಸಮ್ಮಾನ್ ಖಾತೆಯನ್ನು ಆರಂಭಿಸುವ ಪ್ರಕ್ರಿಯೆ ಹೇಗೆ?

ಹೌದು. ಭಾರತದಲ್ಲಿರುವ ಎಲ್ಲಾ ಅಂಚೆ ಕಛೇರಿಗಳಗೂ ಒಂದೇ ಐ.ಎಫ್.ಸಿ. ಕೋಡ್ ಇದ್ದು ಅದು IPOS0000DOP ಆಗಿರುತ್ತದೆ. ಅಂಚೆ ಉಳಿತಾಯಖಾತೆಗೆ ಬ್ಯಾಂಕ್ ಖಾತೆಯಿಂದ ಫಂಡ್ ಟ್ರಾನ್ಸಫರ್ ಮಾಡಿ ನಂತರ ಅರ್ಜಿ ಸಲ್ಲಿಸಿ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣ ಪತ್ರವನ್ನು ಮಾಡಿಸಬಹುದು.

ಈ ಪ್ರಕ್ರಿಯೆ ಹೀಗಿದೆ:

ಬ್ಯಾಂಕ್‌ ಖಾತೆಯ ಮೊಬೈಲ್ APP ತೆರೆಯಿರಿ.

ಅದರಲ್ಲಿ ಹಣ ವರ್ಗಾವಣೆ ಸಂಬಂಧಿಸಿದ ಆಯ್ಕೆಯಲ್ಲಿ Add Beneficiary ಯನ್ನು ಆಯ್ಕೆ ಮಾಡಿ.

ನಿಮ್ಮ ಅಂಚೆ ಉಳಿತಾಯ ಖಾತೆಯ ಸಂಖ್ಯೆ, ಹೆಸರನ್ನು ನಮೂದಿಸಿ.

IFSC ಸಂಖ್ಯೆ IPOS0000DOP ಅನ್ನು ನಮೂದಿಸಿ.

Beneficiary ಸೇರ್ಪಡೆ ಆದ ನಂತರ ಹಣ ವರ್ಗಾವಣೆ ಮಾಡಿ.

ನಂತರ ಈ ಹಣವನ್ನು ಅಂಚೆ ಕಛೇರಿಯಲ್ಲಿ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣ ಪತ್ರವನ್ನು ಮಾಡಿಸಲು ಬಳಸಿ.

ಪ್ರತೀ ಮಹಿಳೆ ಹಾಗೂ ಹೆಣ್ಣು ಮಕ್ಕಳಗೆ ಈ ಯೋಜನೆ ಅತ್ಯಂತ ಲಾಭದಾಯಕವಾಗಿದ್ದು. ಇಂದೇ ನಿಮ್ಮ ಅಂಚೆ ಕಛೇರಿಯಲ್ಲಿ ಈ ಖಾತೆಯನ್ನು ತೆರೆಯಿರಿ. ಇದೊಂದು ಸೀಮಿತ ಅವಧಿಯ ಯೋಜನೆಯಾಗಿದ್ದು, ಅತೀ ಶೀಘ್ರದಲ್ಲಿ ಈ ಯೋಜನೆಯ ಲಾಭವನ್ನು ಪಡೆಯಿರಿ.

ಹೆಚ್ಚಿನ ಮಾಹಿತಿಗಾಗಿ ನಿಮ್ಮ ಸಮೀಪದ ಅಂಚೆ ಕಛೇರಿಯನ್ನು ಸಂಪರ್ಕಿಸಿ ಅಥವಾ www.indiapost.gov.in ಗೆ ಲಾಗಿನ್ ಮಾಡಿ.

Leave a Comment